ಉಡುಪಿ(ಸೆ.25): ದೇಶವನ್ನು ಕಾಯುವ ವೀರಯೋಧರ ಆರೋಗ್ಯ ರಕ್ಷಣೆಗಾಗಿ ಮಾಸ್ಕ್‌ಗಳನ್ನು ತಯಾರಿಸಿ ಕಳುಹಿಸಿದ ಉಡುಪಿಯ ವಿದ್ಯಾರ್ಥಿನಿಯೊಬ್ಬಳ ಕಾಳಜಿಯನ್ನು ಖುದ್ದು ದೇಶದ ರಕ್ಷಣಾ ಸಚಿವರೇ ಶ್ಲಾಘಿಸಿದ್ದಾರೆ.
ಮಣಿಪಾಲ ಮಾಧವ ಕೃಪಾ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಇಶಿತಾ ಆಚಾರ್, 2 ತಿಂಗಳ ಲಾಕ್‌ಡೌನ್ ಸಂದರ್ಭದಲ್ಲಿ ತಾನು ಮನೆಯಲ್ಲಿಯೇ ಹೊಲಿದ 300 ಮಾಸ್ಕ್‌ಗಳನ್ನು ಆರ್ಮಿಯ ಯೋಧರಿಗೆ ಕಳುಹಿಸಿದ್ದಳು.
ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಇಶಿತಾಳ ತಾಯಿ ನಂದಿತಾ ಆಚಾರ್ ಅವರಿಗೆ ಪತ್ರ ಬರೆದಿದ್ದು, ದೇಶದ ಸೈನಿಕರ ಬಗ್ಗೆ ನಿಮ್ಮ ಮಗಳು ಇಶಿತಾಳ ಭಾವನೆ ಮತ್ತು ಕೋವಿಡ್ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತೆಯ ಬಗ್ಗೆ ಆಕೆಯ ಜಾಗೃತಿಯು ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ.
ಶಾಲೆಯಲ್ಲಿ ಸ್ಕೌಟ್ ಶಿಕ್ಷಕರು, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀಡುವುದಕ್ಕಾಗಿ ಮಾಸ್ಕ್ ತಯಾರಿಸುವಂತೆ ಹೇಳಿದ್ದರು. ಅದರಂತೆ ಇಶಿತಾ ಆಚಾರ್ ಮಾಸ್ಕ್‌ಗಳನ್ನು ತಯಾರಿಸಿ ನೀಡಿದ್ದರು. ಇದರಿಂದ ಸ್ಫೂರ್ತಿಗೊಂಡು ಇನ್ನಷ್ಟು ಮಾಸ್ಕ್ ತಯಾರಿಸಿದ್ದಳು.