ಚೀನಾದಲ್ಲಿ ಜೀಸಸ್ ಬದಲು ಕಮ್ಯುನಿಸ್ಟ್ ನಾಯಕರ ಭಾವಚಿತ್ರ ಹಾಕಲು ಒತ್ತಡ

ಚೀನಾದಲ್ಲಿ ಜೀಸಸ್ ಬದಲಿಗೆ ಕಮ್ಯುನಿಸ್ಟ್ ನಾಯಕರ ಭಾವಚಿತ್ರವನ್ನು ಹಾಕುವಂತೆ ಕ್ರೈಸ್ತರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಚೀನಾದಲ್ಲಿ ಧಾರ್ಮಿಕ ಮತಗಳು ಅಲ್ಲಿನ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ತನ್ನ ಸಿದ್ಧಾಂತಗಳಿಗೆ ಬದ್ಧವಾಗಿರುವಂತೆ ಮಾಡಲು ಯತ್ನಿಸುತ್ತಿದ್ದು, ಇದರ ಭಾಗವಾಗಿ ಧಾರ್ಮಿಕ ಮತಾನುಯಾಯಿಗಳ ಮೇಲೆ ಒತ್ತಡ ಹೇರುತ್ತಿದೆ.

ಈಗಾಗಲೇ ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿರುವ ಉಯ್ಘರ್ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಿರುವ ಚೀನಾ ಬಗ್ಗೆ ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡಿರುವ ಬೆನ್ನಲ್ಲೇ ಡೇಲಿ ಮೇಲ್ ಚೀನಾದಲ್ಲಿ ಕ್ರೈಸ್ತರ ಮೇಲೆ ಒತ್ತಡ ಹೇರಲಾಗುತ್ತಿರುವ ಬಗ್ಗೆ ವರದಿ ಪ್ರಕಟಿಸಿದೆ.

ಚೀನಾದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಕಮ್ಯುನಿಸ್ಟ್ ಪಕ್ಷ ಅನುಸರಿಸುತ್ತಿರುವ ದಬ್ಬಾಳಿಕೆ, ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿದ್ದು, ಅಲ್ಲಿನ ಕ್ರೈಸ್ತ ಮತಾನುಯಾಯಿಗಳಿಗೆ ಅವರ ಮನೆಗಳಲ್ಲಿ ಜೀಸಸ್ ನ ಫೋಟೋಗಳನ್ನು ತೆಗೆದು ಕಮ್ಯುನಿಸ್ಟ್ ನಾಯಕರ ಫೋಟೊಗಳನ್ನು ಹಾಕುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಕಳೆದ ವರ್ಷವಷ್ಟೇ ಚೀನಾ ಸರ್ಕಾರ, ತನ್ನ ದೇಶದಲ್ಲಿ ಪಾಲಿಸಲಾಗುವ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಸಮಾಜವಾದಿ ತತ್ವಗಳನ್ನು ಪ್ರತಿಬಿಂಬಿಸುವಂತೆ ತಿದ್ದುಪಡಿ ಮಾಡಲು ಆದೇಶ ಹೊರಡಿಸಿ, ತಿದ್ದುಪಡಿಯಾದ ಧಾರ್ಮಿಕ ಗ್ರಂಥಗಳಲ್ಲಿ ಸರ್ಕಾರದ ವಿರುದ್ಧದ ಯಾವುದೇ ತತ್ವಗಳೂ ಇರಬಾರದೆಂದು ಆದೇಶ ಹೊರಡಿಸಿತ್ತು.

ಅನ್ಹುಯಿ, ಜಿಯಾಂಗ್ಸು, ಹೆಬೀ ಮತ್ತು ಝೆಜಿಯಾಂಗ್ ಗಳಲ್ಲಿ ಕ್ರೈಸ್ತರಿಗೆ ಜೀಸಸ್ ಹಾಗೂ ಶಿಲುಬೆಯ ಪ್ರತಿಮೆಗಳನ್ನು ತೆಗೆದುಹಾಕಿ ಅಲ್ಲಿ ಚೀನಾದ ಕಮ್ಯುನಿಸ್ಟ್ ನಾಯಕರ ಫೋಟೊಗಳನ್ನು ಹಾಕಬೇಕೆಂಬ ಆದೇಶವನ್ನು ಚೀನಾದ ಸರ್ಕಾರಿ ಅಧಿಕಾರಿಗಳು ನೀಡಿದ್ದಾರೆ. ಹಾಗೆಯೇ ಚೀನಾದ ಅಧಿಕಾರಿಗಳು ಚರ್ಚ್ ಗಳಿಗೆ ತೆರಳಿ ಶಿಲುಬೆಗಳನ್ನು ಏಸುಕ್ರಿಸ್ತನ ಪ್ರತಿಮೆಗಳನ್ನು ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಶಿವಾನ್ ಕ್ರೈಸ್ಟ್ ಚರ್ಚ್ ನಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಅಲ್ಲಿನ ಶ್ರದ್ಧಾಳುಗಳ ತಂಡ, ಶಿಲುಬೆ, ಕ್ರಿಸ್ತನ ಪ್ರತಿಮೆಯನ್ನು ಧ್ವಂಸಗೊಳಿಸಲು ಕೇನ್ ನಲ್ಲಿ ಬಂದಿದ್ದ ಚೀನಾ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ವಿರೋಧಿಸಿದ ಘಟನೆ ನಡೆದಿದೆ.

Comments (0)
Add Comment