ರಾಜ್ಯದಲ್ಲಿ ಕೊರೋನಾ ಇಳಿಕೆ : ಸೋಂಕಿತರಗಿಂತ ಗುಣಮುಖರು ಹೆಚ್ಚಳ

ಬೆಂಗಳೂರು (ಸೆ.29): ರಾಜ್ಯದಲ್ಲಿ ಸೋಮವಾರ ಹೊಸದಾಗಿ 6,892 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ 59 ಮಂದಿ ಕೊರೋನಾಕ್ಕೆ ಬಲಿಯಾಗಿದ್ದು, ರಾಜ್ಯದಲ್ಲಿ ಒಟ್ಟು 8,641 ಮಂದಿ ಈ ಮಹಾಮಾರಿಯ ಕಾರಣದಿಂದ ಪ್ರಾಣ ಕಳೆದುಕೊಂಡಿದ್ದಾರೆ. 7509 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಸೋಮವಾರ ಕೊರೋನಾ ಪತ್ತೆಯಾದವರಿಗಿಂತ ಹೆಚ್ಚು ಮಂದಿ ಕೊರೋನಾ ಜಯಿಸಿದರೂ ಕೂಡ ಸಕ್ರಿಯ ಪ್ರಕರಣಗಳ ಸಂಖ್ಯೆ ಲಕ್ಷದ ಗಡಿ ಮೀರಿಯೇ ಇದೆ. ಸೋಮವಾರ 1,04,048 ಮಂದಿ ಕೊರೋನಾ ಪೀಡಿತರು ರಾಜ್ಯದ ವಿವಿಧ ಕೋವಿಡ್‌ ಅಸ್ಪತ್ರೆ, ಆರೈಕೆ ಕೇಂದ್ರ, ಹೋಮ್‌ ಐಸೊಲೇಷನ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಲ್ಲಿ 822 ಮಂದಿಯ ಸ್ಥಿತಿ ಗಂಭೀರವಾಗಿದ್ದು, ವಿವಿಧ ಅಸ್ಪತ್ರೆಗಳ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಈ ವರೆಗೆ ಒಟ್ಟು 5.82 ಲಕ್ಷ ಮಂದಿ ಕೊರೋನಾದಿಂದ ಬಾಧಿತರಾಗಿದ್ದಾರೆ. ಇವರಲ್ಲಿ 4.69 ಲಕ್ಷ ಮಂದಿ ಕೊರೋನಾವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ. ಮೊನ್ನೆ ಭಾನುವಾರವಾಗಿದ್ದ ಕಾರಣ ಎಂದಿನಂತೆ ತುಸು ಕಡಿಮೆ ಪ್ರಮಾಣದಲ್ಲಿ ಕೊರೋನಾ ಪರೀಕ್ಷೆ ನಡೆದಿದೆ. 58,862 ಮಂದಿಯ ಪರೀಕ್ಷೆ ನಡೆದಿದ್ದು, ಒಟ್ಟು 47.18 ಲಕ್ಷ ಪರೀಕ್ಷೆಯನ್ನು ಈವರೆಗೆ ನಡೆಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 9, ದಕ್ಷಿಣ ಕನ್ನಡ 7, ಬಳ್ಳಾರಿ, ಶಿವಮೊಗ್ಗ ತಲಾ 6, ತುಮಕೂರು, ಹಾವೇರಿ, ಹಾಸನ, ಬೆಳಗಾವಿ ತಲಾ 4, ಕಲಬುರಗಿ, ಮೈಸೂರು, ಉತ್ತರ ಕನ್ನಡದಲ್ಲಿ ತಲಾ 2, ಯಾದಗಿರಿ, ವಿಜಯಪುರ, ರಾಯಚೂರು, ಕೊಡಗು, ಧಾರವಾಡ, ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜ ನಗರದಲ್ಲಿ ತಲಾ 1 ಸಾವು ಕೊರೋನಾದಿಂದಾಗಿ ಸಂಭವಿಸಿದೆ.

ಬೆಂಗಳೂರು ನಗರದಲ್ಲಿ 2,722, ಉಡುಪಿ 332, ಹಾಸನ 320, ಕಲಬುರಗಿ 273, ಮೈಸೂರು 240, ಚಿಕ್ಕಮಗಳೂರು 219, ದಕ್ಷಿಣ ಕನ್ನಡ 217, ಮಂಡ್ಯ 209, ಬಾಗಲಕೋಟೆ 191, ತುಮಕೂರು 187, ಶಿವಮೊಗ್ಗ 181, ಚಿತ್ರದುರ್ಗ ಮತ್ತು ಉತ್ತರ ಕನ್ನಡ 176, ಬಳ್ಳಾರಿ 164, ಧಾರವಾಡ 145, ವಿಜಯಪುರ 117, ಬೆಂಗಳೂರು ಗ್ರಾಮಾಂತರ 110, ದಾವಣಗೆರೆ 107, ಚಿಕ್ಕಬಳ್ಳಾಪುರ 106, ಕೋಲಾರ 90, ಹಾವೇರಿ 83, ಯಾದಗಿರಿ 82, ಬೆಳಗಾವಿ 78, ರಾಮನಗರ 75, ಚಾಮರಾಜನಗರ 64, ಗದಗ 61, ರಾಯಚೂರು 52, ಬೀದರ್‌ ಮತ್ತು ಕೊಪ್ಪಳ 45, ಕೊಡಗು 25 ಕೊರೋನಾ ಸೋಂಕಿನ ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ.

ಸಚಿವ ಮಾಧುಸ್ವಾಮಿ, ಶಾಸಕ ಎಚ್‌.ಕೆ.ಪಾಟೀಲ್‌ಗೆ ಸೋಂಕು
 
 ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್‌.ಕೆ.ಪಾಟೀಲ್‌ ಇಬ್ಬರಿಗೂ ಕೊರೋನಾ ಸೋಂಕು ತಗುಲಿದೆ.

ಸಚಿ​ವರ ಚಾಲಕನಿಗೆ ಸೋಂಕು: ಕಳೆದ ನಾಲ್ಕು ದಿನಗಳ ಹಿಂದೆ ಮಾಧುಸ್ವಾಮಿ ಅವರ ಕಾರು ಚಾಲಕನಿಗೆ ಸೋಂಕು ತಗುಲಿತ್ತು. ಬಳಿಕ ಅವರ ಮನೆಯ ಅಡುಗೆಯವನಿಗೂ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಸ್ವಾಬ್‌ ಟೆಸ್ಟ್‌ ಮಾಡಿಸಿದ್ದರು. ಇದೀಗ ಅವರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಚಿವರು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದೇ ವೇಳೆ ಎಚ್‌.ಕೆ.​ಪಾ​ಟೀಲ್‌, ಮನೆಯಲ್ಲೇ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ.

Comments (0)
Add Comment