ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಕಗೊಂಡಿರುವ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಅವರನ್ನು ಶನಿವಾರ ಭೇಟಿ ಮಾಡಿ,”ಜಿಲ್ಲಾ ಅಭಿವೃದ್ಧಿಗೆ ಸಂಬಂಧಪಟ್ಟ ‘ಅಭ್ಯುದಯ’ ಕಿರುಹೊತ್ತಿಗೆ ನೀಡಿ ಕೆಲ ಕಾಲ ಚರ್ಚೆ ನಡೆಸಿದ ಬಳಿಕ ರಾಜೀನಾಮೆಯನ್ನು ಸಲ್ಲಿಸಿದ್ದು, ಅಂಗೀಕಾರವಾಗಿಲ್ಲ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ರಾಷ್ಟ್ರೀಯ ವರಿಷ್ಠರಿಗೆ ಸಿ.ಟಿ. ರವಿ ಮಾಹಿತಿ ರವಾನೆ ಮಾಡಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ನವೆಂಬರ್‌ನಲ್ಲಿ ಸಚಿವ ಸಂಪುಟ ಪುನಾರಚನೆಯಾಗಲಿದೆ. ಜತೆಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಕನ್ನಡ-ಸಂಸ್ಕೃತಿ ಇಲಾಖೆಯಲ್ಲಿ ಮಹತ್ವದ ಚಟುವಟಿಕೆಗಳು ನಡೆಯಬೇಕಿದೆ. ಹೀಗಾಗಿ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸಚಿವ ಸ್ಥಾನದಲ್ಲಿ ಮುಂದುವರಿಯುವಂತೆ ಸೂಚಿಸುವ ಸಾಧ್ಯತೆ ಇದೆ.
ಅಕ್ಟೋಬರ್ 5 ಹಾಗೂ 6ರಂದು ದಿಲ್ಲಿಯಲ್ಲಿ ಪಕ್ಷದ ಸಂಘಟನಾ ಸಭೆ ನಡೆಯಲಿದೆ. ಪಕ್ಷದ ಆಯಕಟ್ಟಿನ ಹುದ್ದೆಗೆ ಆಯ್ಕೆಗೊಂಡ ರಾಜ್ಯದ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದು, ರಾಜೀನಾಮೆ ಬಗ್ಗೆ ವರಿಷ್ಠರು ಅಲ್ಲಿಯೇ ರ್ನಿಯ ತೆಗೆದುಕೊಳ್ಳುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸಚಿವರು ನೀಡುವ ಮೊದಲ ರಾಜೀನಾಮೆ ಪ್ರಕರಣ ಇದಾಗಿದೆ. ಈ ಹಿಂದೆ ಬಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ವಿವಾದದ ಹಿನ್ನೆಲೆಯಲ್ಲಿ ಮಂತ್ರಿಗಳು ರಾಜೀನಾಮೆ ನೀಡಿದ್ದರು. ಆದರೆ ಸಂಘಟನೆ ಬಲಪಡಿಸುವುದಕ್ಕಾಗಿ ಸಚಿವರೊಬ್ಬರು ಅಧಿಕಾರ ತ್ಯಾಗ ಮಾಡುತ್ತಿರುವ ವಿನೂತನ ಪ್ರಕರಣ ಇದಾಗಿದೆ.