ಅಬುಧಾಬಿ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-13ರಲ್ಲಿ ಸತತ 4ನೇ ಜಯ ದಾಖಲಿಸಿತು. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ ಬಳಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಮುಂಬೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಡೆಲ್ಲಿ ಸತತ 3 ಗೆಲುವಿನ ಬಳಿಕ ಸೋಲು ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ (69*ರನ್, 52 ಎಸೆತ, 6 ಬೌಂಡರಿ, 1 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಲವಾಗಿ 4 ವಿಕೆಟ್‌ಗೆ 162 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ ಇಂಡಿಯನ್ಸ್, ಕ್ವಿಂಟನ್ ಡಿಕಾಕ್ (53 ರನ್, 36 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಸೂರ್ಯಕುಮಾರ್ ಯಾದವ್ (53 ರನ್, 32 ಎಸೆತ, 6 ಬೌಂಡರಿ, 1 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ಲವಾಗಿ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 166 ರನ್‌ಗಳಿಸಿ ಜಯದ ನಗೆ ಬೀರಿತು.
ಡೆಲ್ಲಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಚೇಸಿಂಗ್ ಆರಂಭಿಸಿದ ಮುಂಬೈ ತಂಡ ಆರಂಭದಲ್ಲೇ ರೋಹಿತ್ ಶರ್ಮ (5) ವಿಕೆಟ್ ಕಳೆದುಕೊಂಡಿತು. ಬಳಿಕ ಜತೆಯಾದ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಬಿರುಸಿನ ಬ್ಯಾಟಿಂಗ್ ನಿರ್ವಹಣೆ ತೋರಿತು. 2ನೇ ವಿಕೆಟ್‌ಗೆ 46 ರನ್ ಪೇರಿಸಿ ಡಿಕಾಕ್ ಬೇರ್ಪಟ್ಟರು. ಬಳಿಕ ರನ್‌ಗತಿಗೆ ಮತ್ತಷ್ಟು ಚುರುಕು ಮುಟ್ಟಿಸಿದ ಸೂರ್ಯಕುಮಾರ್ ಹಾಗೂ ಇಶಾನ್ ಕಿಶನ್ (28) ಜೋಡಿ 3ನೇ ವಿಕೆಟ್‌ಗೆ ಬಿರುಸಿನ 53 ಪೇರಿಸಿತು. ಸೂರ್ಯಕುಮಾರ್ ನಿರ್ಗಮನದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (0) ಕೂಡ ಸ್ಟೋಯಿನಿಸ್ ಎಸೆತದಲ್ಲಿ ಔಟಾದರು. ಕಡೇ ಓವರ್‌ಗಳಲ್ಲಿ ಕೈರಾನ್ ಪೊಲ್ಲಾರ್ಡ್ (11*ರನ್, 14 ಎಸೆತ, 1 ಬೌಂಡರಿ) ಹಾಗೂ ಕೃನಾಲ್ ಪಾಂಡ್ಯ (12*ರನ್, 7 ಎಸೆತ, 2 ಬೌಂಡರಿ) ಜೋಡಿ ತಂಡವನ್ನು ಗೆಲುವಿನ ದಡ ಸೇರಿಸಿತು.
* ಡೆಲ್ಲಿಗೆ ಶಿಖರ್ ಧವನ್ ಆಸರೆ:
ಉತ್ತಮ ಆರಂಭ ಪಡೆಯುವ ಹುಮ್ಮಸ್ಸಿನಲ್ಲಿದ್ದ ಡೆಲ್ಲಿಗೆ ಟ್ರೆಂಟ್ ಬೌಲ್ಟ್ ಮೊದಲ ಓವರ್‌ನಲ್ಲೇ ಆಘಾತ ನೀಡಿದರು. ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ (4) ಕೃನಾಲ್ ಪಾಂಡ್ಯಗೆ ಕ್ಯಾಚ್ ನೀಡಿದರು. ನಂತರ ಜತೆಯಾದ ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ (15) ಜೋಡಿ ಇನಿಂಗ್ಸ್ ಕಟ್ಟಲು ಯತ್ನಿಸಿತು. ಪ್ರಸಕ್ತ ವರ್ಷದ ಮೊದಲ ಪಂದ್ಯವಾಡಿದ ರಹಾನೆ ಅವರನ್ನು ಕೃನಾಲ್ ಪಾಂಡ್ಯ ಎಲ್‌ಬಿ ಬಲೆಗೆ ಬೀಳಿಸಿದರು. 24 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಡೆಲ್ಲಿ ಆರಂಭ ಆಘಾತ ಎದುರಿಸಿತು. ಶ್ರೇಯಸ್ ಅಯ್ಯರ್ ಹಾಗೂ ಧವನ್ ಜೋಡಿ ಆರಂಭಿಕ ವೈಲ್ಯವನ್ನು ಲೆಕ್ಕಿಸದೆ ಬಿರುಸಿನ ಬ್ಯಾಟಿಂಗ್ ತೋರಿತು. ಆಘಾತದಿಂದ ತತ್ತರಿಸಿದ್ದ ಡೆಲ್ಲಿ ತಂಡಕ್ಕೆ ಈ ಜೋಡಿ ಚೇತರಿಕೆ ನೀಡಿತು. ಉತ್ತಮ ಸ್ಥಿತಿಗೆ ಕೊಂಡ್ಯೊಯುತ್ತಿದ್ದ ಈ ಜೋಡಿಗೆ ಕೃನಾಲ್ ಮತ್ತೊಮ್ಮೆ ವಿಲನ್ ಆದರು. ಕೃನಾಲ್ ಎಸೆತದಲ್ಲಿ ಶ್ರೇಯಸ್, ಟ್ರೆಂಟ್ ಬೌಲ್ಟ್‌ಗೆ ಕ್ಯಾಚ್ ನೀಡಿದರು. ಈ ಜೋಡಿ 3ನೇ ವಿಕೆಟ್‌ಗೆ 85 ರನ್ ಜತೆಯಾಟವಾಡಿ ನಿರ್ಗಮಿಸಿತು. ಬಳಿಕ ಬಂದ ಮಾರ್ಕಸ್ ಸ್ಟೋಯಿನಿಸ್ (13) ಕೆಲಕಾಲ ಬಿರುಸಿನ ನಿರ್ವಹಣೆ ನೀಡಿ ರನೌಟ್ ಬಲೆಗೆ ಬಿದ್ದರೆ, ಅಂತಿಮ ಹಂತದವರೆಗೂ ಕ್ರೀಸ್‌ನಲ್ಲಿ ಉಳಿದ ಧವನ್ ಪ್ರಸಕ್ತ ಆವೃತ್ತಿಯ ಚೊಚ್ಚಲ ಅರ್ಧಶತಕದ ಸಾಧನೆಯೊಂದಿಗೆ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಡೆಲ್ಲಿ ಕ್ಯಾಪಿಟಲ್ಸ್: 4 ವಿಕೆಟ್‌ಗೆ 162 (ಶಿಖರ್ ಧವನ್ 69, ಶ್ರೇಯಸ್ 42, ಅಲೆಕ್ಸ್ ಕ್ಯಾರಿ 14, ಕೃನಾಲ್ ಪಾಂಡ್ಯ 26ಕ್ಕೆ 2), ಮುಂಬೈ ಇಂಡಿಯನ್ಸ್: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 166 (ಡಿಕಾಕ್ 53, ಸೂರ್ಯಕುಮಾರ್ ಯಾದವ್ 53, ಇಶಾನ್ ಕಿಶನ್ 28, ಕಗಿಸೊ ರಬಾಡ 28ಕ್ಕೆ 2, ಅಕ್ಷರ್ ಪಟೇಲ್ 24ಕ್ಕೆ 1, ಅಶ್ವಿನ್ 35ಕ್ಕೆ 1, ಸ್ಟೋಯಿನಿಸ್ 31ಕ್ಕೆ 1).