ದೇಶದ 8 ಬೀಚ್​ಗಳಿಗೆ ಅಂತಾರಾಷ್ಟ್ರೀಯ ಮಟ್ಟದ ‘ಬ್ಲೂ ಫ್ಲ್ಯಾಗ್​’

ನವದೆಹಲಿ: ಭಾರತದ ಎಂಟು ಕರಾವಳಿ ತೀರಗಳಿಗೆ ಅಂತಾರಾಷ್ಟ್ರೀಯ ಮಟ್ಟದ ‘ಬ್ಲೂ ಫ್ಲ್ಯಾಗ್​’ ಮಾನ್ಯತೆ ಲಭಿಸಿದೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್​ ಈ ವಿಷಯ ಹಂಚಿಕೊಂಡಿದ್ದಾರೆ.

ದೇಶದ ಐದು ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಬೀಚ್​​ಗಳಿಗೆ ಈ ಮಾನ್ಯತೆ ಸಿಕ್ಕಿದೆ. ಕಾಸರಗೋಡು ಮತ್ತು ಪಡುಬಿದ್ರಿ (ಕರ್ನಾಟಕ), ಕಪ್ಪಡ್​ (ಕೇರಳ), ಋಷಿಕೊಂಡ (ಆಂಧ್ರಪ್ರದೇಶ), ಶಿವರಾಜ್​ಪುರ (ದ್ವಾರಕಾ-ಗುಜರಾತ್​), ಘೋಘ್ಲಾ (ದಿಯು), ಗೋಲ್ಡನ್ ಬೀಚ್​(ಒಡಿಶಾ), ರಾಧಾನಗರ್​ (ಅಂಡಮಾನ್​-ನಿಕೋಬಾರ್​) ಬೀಚ್​ಗಳು ಬ್ಲೂ ಫ್ಲ್ಯಾಗ್​ಗೆ ಪಾತ್ರವಾಗಿವೆ.

ಇದೊಂದು ಅದ್ಭುತ, ಇದುವರೆಗೆ ದೇಶಕ್ಕೆ ಒಂದೇ ಪ್ರಯತ್ನದಲ್ಲಿ ಇಷ್ಟೊಂದು ‘ಬ್ಲೂ ಫ್ಲ್ಯಾಗ್’ ಲಭಿಸಿಲ್ಲ. ಇದಷ್ಟೇ ಅಲ್ಲ, ಕರಾವಳಿ ತೀರದಲ್ಲಿ ಮಾಲಿನ್ಯ ನಿಯಂತ್ರಣ ವಿಷಯದಲ್ಲೂ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಜ್ಯೂರಿ ಮೂರನೇ ಪ್ರಶಸ್ತಿ ನೀಡಿದೆ ಎಂದು ಜಾವಡೇಕರ್​ ತಿಳಿಸಿದ್ದಾರೆ.

ಜಪಾನ್​, ದಕ್ಷಿಣ ಕೊರಿಯ, ಯುಎಇ ಮಾತ್ರ ಐದಾರು ವರ್ಷಗಳಲ್ಲಿ ಒಂದೆರಡು ಬ್ಲೂ ಫ್ಲ್ಯಾಗ್ ಪಡೆದ ಏಷ್ಯನ್​ ರಾಷ್ಟ್ರಗಳಾಗಿವೆ. ಆದರೆ ಭಾರತ ಎರಡೇ ವರ್ಷದಲ್ಲಿ 8 ಬ್ಲೂ ಫ್ಲ್ಯಾಗ್ ಗಳಿಸುವ ಮೂಲಕ ಏಷ್ಯಾ-ಪೆಸಿಫಿಕ್​ ಪ್ರದೇಶದ ಪ್ರಥಮ ದೇಶ ಎನಿಸಿಕೊಂಡಿದೆ ಎಂದರು. (ಏಜೆನ್ಸೀಸ್)

Comments (0)
Add Comment