ರಾಯಚೂರಿನಲ್ಲಿ ಭಾರೀ ಮಳೆ; ಜನ-ಜಾನುವಾರುಗಳ ರಕ್ಷಣೆಗೆ ಎನ್‌ಡಿಆರ್‌ಎಫ್ ತಂಡ ಆಗಮನ

22

ರಾಯಚೂರು, ಜೂ. 18: ಶುಕ್ರವಾರ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ನಸುಕಿನ ಜಾವದವರೆಗೆ ಗುಡುಗು-ಸಿಡಿಲು, ಮಿಂಚು ಸಹಿತ ಧಾರಾಕಾರ ಮಳೆಗೆ ಹಲವೆಡೆ ಅವಾಂತರಗಳು ಸಂಭವಿಸಿದೆ. ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದ್ದು, ಹಲವು ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಕಾಡ್ಲೂರು, ಜೇಗರಕಲ್, ದೇವಸೂಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.

ರಾಯಚೂರಿನ ಮಸ್ಕಿಯಲ್ಲಿ ಮಳೆ, ಬಿರುಗಾಳಿ ರೌದ್ರಾವತಾರ; ನೆಲಕ್ಕುರುಳಿದ ಮರ, ಕಂಬ, ಮನೆಗಳು

ತುಂಬಿ ಹರಿಯುತ್ತಿರುವ ಕಾಡ್ಲೂರು ಕಿರು ಸೇತುವೆ: ರಸ್ತೆ ಸಂಚಾರ ಸ್ಥಗಿತ

ಕಾಡ್ಲೂರು ಕಿರು ಸೇತುವೆಯ ಕೆಳಗೆ ತುಂಬಿ ಹರಿಯುತ್ತಿರುವ ಮಳೆ ನೀರಿನಿಂದಾಗಿ ಸಂಪೂರ್ಣವಾಗಿ ರಸ್ತೆ ಸ್ಥಗಿತಗೊಂಡಿದೆ. ಅದೇ ಮಾರ್ಗದಿಂದ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಕಂಪನಿಗಳಿಗೆ ತೆರಳುವ ಕಾರ್ಮಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪರದಾಡಿದರು. ಅಲ್ಲದೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ವಾಪಸ್ ತೆರಳಿದರು. ಇದೇ ಮಾರ್ಗದಿಂದ ಜೇಗರಕಲ್, ಅರಷಿಣಿಗಿ, ಗುರ್ಜಾಪುರ, ಕರೇಕಲ್, ರಂಗಾಪುರ, ಬೇವಿನಬೆಂಚಿ ಸೇರಿದಂತೆ ಸುತ್ತಲಿನ 20ಕ್ಕೂ ಅಧಿಕ ಹಳ್ಳಿಗಳ ಜನರು ತೊಂದರೆ ಅನುಭವಿಸಿದರು.ಕಾಡ್ಲೂರು ಕಿರು ಸೇತುವೆಯ ದುರಸ್ತಿಗೆ ಹಲವು ಬಾರಿಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಬೇಜವಾಬ್ದಾರಿತನ ವಹಿಸುತ್ತಿದ್ದಾರೆ. ಮಳೆ ಬಂದಾಗ ಹಲವು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಜನ ಜಾನುವಾರುಗಳ ಸುರಕ್ಷತೆಗಾಗಿ ಎನ್‌ಡಿಆರ್‌ಎಫ್ ತಂಡ ಆಗಮನ

ದೇವಸೂಗೂರು 48.2 ಎಂ.ಎಂ., ಜೇಗರಕಲ್ 30.6 ಎಂ.ಎಂ., ಯರಗೇರಾ 11 ಎಂ.ಎಂ ಮತ್ತು ಕಲ್ಮಲಾ , ಚಂದ್ರಬಡಾ, ಗಾಜರಾಳ ಗ್ರಾಮದಲ್ಲಿ 8 ಎಂಎಂ ರಷ್ಟು ಮಳೆಯಾಗಿದೆ ಎಂಬುದು ಮಾಹಿತಿ ಇದೆ.

ರಾಯಚೂರು ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಮುನ್ನೆಚ್ಚರಿಕಾ ಕ್ರಮವಾಗಿ ಕೃಷ್ಣಾನದಿ ಮತ್ತು ತುಂಗಭದ್ರ ನದಿ ಪಾತ್ರದ ಹತ್ತಿರದಲ್ಲಿರುವ ಗ್ರಾಮಗಳ ಜನ ಜಾನುವಾರುಗಳ ಸುರಕ್ಷತೆಗಾಗಿ ಎನ್‌ಡಿಆರ್ ಎಫ್ ತಂಡ ಆಗಮಿಸಿದೆ. ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಗುಂಟೂರು 10ನೇ ಬಟಾಲಿಯನ್ ತಂಡ ಆಗಮಿಸಿದ್ದು ಅವರನ್ನು ಶಕ್ತಿನಗರದ ಅಂಬೇಡ್ಕರ್ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಇನ್ಸ್ಪೆಕ್ಟರ್ ಸೇರಿದಂತೆ 24 ಜನ ಇರುವ ತಂಡ ಇದ್ದಾಗಿದೆ.

ನೈಋತ್ಯ ಮಾನ್ಸೂನ್ ಸಿದ್ಧತೆಯಲ್ಲಿ ಇಲಾಖೆಗಳು

ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ 2022 ನೇ ಸಾಲಿನ ನೈಋತ್ಯ ಮುಂಗಾರಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ಮತ್ತು ತುಂಗಭದ್ರ ಅಚ್ಚುಕಟ್ಟು ಪ್ರದೇಶಗಳಲ್ಲಿ ವಾಡಿಕೆಯಂತೆ ಸಾಮಾನ್ಯ ಮಳೆಯಾಗುವುದರಿಂದ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಉದ್ಭವಿಸಬಹುದು. ಆದ್ದರಿಂದ ಮಾನ್ಸೂನ್ ಪ್ರಾರಂಭವಾಗುವ ಮೊದಲು ಸಂಬಂಧಿಸಿದ ಇಲಾಖೆಗಳು ನೈಋತ್ಯ ಮಾನ್ಸೂನ್ ಸಿದ್ಧತೆಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪ್ರವಾಹ ಮುನ್ನೆಚ್ಚರಿಕಾ ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Leave A Reply

Your email address will not be published.