ಸಿಂಹಾವಲೋಕನ | ಸಜಿ ಕಾರ್ಕಳ

825

ಹೊಸ ನಿರ್ಣಯ ಮತ್ತು ನಿರೀಕ್ಷೆಯಿಂದ ಬಹಳ ಸಂಭ್ರಮ ಮತ್ತು ಸಡಗರದಿಂದ ಎದುರುಗೊಂಡ ಈ ವರ್ಷದ ಕೊನೆಯ ದಿನಕ್ಕೆ ಬಂದು ನಿಂತಿದ್ದೇವೆ. ಅತಿವೃಷ್ಟಿ-ಅನಾವೃಷ್ಟಿ ಎಂಬ ದುರಂತಗಳೂ ಕರೋನಾ ಎಂಬ ಸಾಂಕ್ರಾಮಿಕ ಪಿಡುಗೂ  ಅದರಿಂದುಂಟಾದ ಆರ್ಥಿಕ ಸಂಕಷ್ಟಗಳ ನಡುವೆ ನೆಲೆಯಿಲ್ಲದ ನೀರಲ್ಲೋ ಎಂಬಂತೆ ಜನರಿದ್ದಾರೆ. “ನೀವು ಬಹಳ ಬೆಳೆಯನ್ನು ನಿರೀಕ್ಷಿಸಿದ್ದೀರಿ  ಆಹಾ ಸ್ವಲ್ಪ ಮಾತ್ರ ಸಿಕ್ಕಿತ್ತು” ಎಂಬ ಪ್ರವಾದಿಯ ಮಾತಿನಂತೆ (ಹಗ್ಗಾಯ 1:9) ಲೋಕ ನಿರಾಶೆಯಲ್ಲಿ ಈ ವರ್ಷವನ್ನು ಬೀಳ್ಕೊಡುತ್ತಿದೆ. ಆದರೆ ಒಬ್ಬ ಭಕ್ತನ ವೀಕ್ಷಣೆಯು ಸಾಮಾನ್ಯ ಜನರ ವೀಕ್ಷಣೆಗಿಂತ ವಿಭಿನ್ನವಾಗಿದೆ. ಕಾರಣ ನಾವು ಈ ಲೋಕದಲ್ಲಿದ್ದರೂ ಈ ಲೋಕದವರಲ್ಲ. ನಾವಾದರೋ ಪರಲೋಕ ಸಂಸ್ಥಾನದವರು, ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರು ನೋಡುತ್ತಾ ಇದ್ದೇವೆ (ಫಿಲಿ 3:20). ವರುಷ ಮುಗಿಯುತ್ತಿದ್ದಂತೆ ನಾವು ನಮ್ಮನ್ನೇ ಆತ್ಮಾವಲೋಕನ ಮಾಡಿಕೊಳ್ಳುವುದೂ, ನೂತನ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಒಬ್ಬ ಭಕ್ತನಿಗೆ ಅತ್ಯಂತ ಅಮೂಲ್ಯವಾದ ಸಂಗತಿಯಾಗಿದೆ. ಮುಖ್ಯವಾಗಿ ಆತ್ಮಿಕ ವಿಷಯಗಳಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣದೆ ಅಸಂತೃಪ್ತರಾಗಿರುವವರಾದರೆ ಹೊಸ ವರ್ಷಕ್ಕೆ ಕಾಲಿಡುವ ಮುಂಚೆ  ನಮ್ಮ ದಾರಿಗಳನ್ನು ಪರೀಕ್ಷಿಸುವುದು ಉತ್ತಮವಾಗಿರುತ್ತದೆ.

                  ಹಳೆ ಹಳೆಯ ಒಡಂಬಡಿಕೆಯ ಅನೇಕ ಸಂಗತಿಗಳು ನಮಗೆ ನಿದರ್ಶನಗಳಾಗಿವೆ.(1ಕೊರಿ 10:6) ಹಳೆಯ ಒಡಂಬಡಿಕೆಯ ಅಕ್ಷರಿಕ  ಕೆಲಸವು ಹೊಸ ಒಡಂಬಡಿಕೆಯ ಆತ್ಮಿಕ ಕೆಲಸದ ನೆರಳಾಗಿದೆ. ಹಳೆಯ ಒಡಂಬಡಿಕೆಯ ಅಕ್ಷರಿಕ ದೇವಾಲಯವು ಹೊಸ ಒಡಂಬಡಿಕೆಯ ನಾವೆಂಬ ಆಲಯಕ್ಕೆ ಹೋಲಿಕೆಯಾಗಿದೆ  (1ಕೊರಿ 3:16-17). ಉದಾಹರಣೆಗೆ ಕ್ರಿ. ಪೂ  536 ರಲ್ಲಿ ಪಾರಸೀಯ  ಅರಸನಾದ ಕೋರೇಶನ ಆಜ್ಞೆಯಂತೆ ರಾಜ್ಯಪಾಲರಾಗಿದ್ದ ಜೆರುಬ್ಬಾಬೆಲ್ ಮತ್ತು ಯಾಜಕನಾದ ಯಹೋಶುವನ ನೇತೃತ್ವದಲ್ಲಿ ಹೆಚ್ಚುಕಮ್ಮಿ ಐವತ್ತು ಸಾವಿರ ಯಹೂದ್ಯರು ಜೆರುಸಲೇಮಿಗೆ ಬಂದು ದೇವಾಲಯದ ಕೆಲಸಕ್ಕೆ ಕೈಹಾಕಿದರು. ಆದರೆ ಸುತ್ತಮುತ್ತಲಿನ ಜನರ ವಿರೋಧದಿಂದಾಗಿ  ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಆದರೆ ಅದು 16 ವರ್ಷಗಳ ತನಕ ಮೊಟಕುಗೊಂಡಿತು. ನಂತರ ಪ್ರವಾದಿಗಳಾದ ಹಗ್ಗಾಯ ಹಾಗೂ ಜೆಕರ್ಯರು ದೇವಾಲಯದ ಕೆಲಸಕ್ಕಾಗಿ ಜನರನ್ನು ಹುರಿದುಂಬಿಸಿದರು. ಇದರ ಪರಿಣಾಮವಾಗಿ ನಾಲ್ಕು ವರ್ಷಗಳೊಳಗೆ ದೇವಾಲಯದ ಕೆಲಸವು ಮುಗಿಯಿತು. ಇಸ್ರಾಯೇಲ್ಯರು ದೇವಾಲಯದ ಕೆಲಸಕ್ಕಿಂತ ಸ್ವಂತ ಮನೆಯ ಕೆಲಸಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದರಿಂದಲೇ ನಾಲ್ಕು ವರ್ಷದೊಳಗೆ ಮುಗಿಯಬೇಕಾಗಿದ್ದ ಕೆಲಸವು ಹದಿನಾರು ವರ್ಷಗಳ ತನಕ ಮೊಟಕುಗೊಂಡಿದ್ದು.

             ಇದರಿಂದಾಗಿ ಅವರು ಆರ್ಥಿಕ ವಿಚಾರಗಳಲ್ಲಿ ಬಹಳ ಸೋಲನ್ನು ಅನುಭವಿಸಿದರು. ಅವರ ಪ್ರಯತ್ನಗಳಿಗೆ ತಕ್ಕಂತೆ ಆದಾಯವು ಸಿಗಲಿಲ್ಲ  ಅವರ ಸ್ಥಿತಿ ಹೇಗಿತ್ತೆಂದರೆ- “ ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ; ತಿನ್ನುತ್ತೀರಿ, ತೃಪ್ತಿಯಾಗದು, ಕುಡಿಯುತ್ತೀರಿ, ಆನಂದವಾಗದು; ಹೊದಿಯುತ್ತೀರಿ, ಬೆಚ್ಚಗಾಗದು; ಸಂಬಳಗಾರನು ಸಂಬಳಹಾಕುವ ಚೀಲವು ತೂತಿನದು” (ಹಗ್ಗಾಯ 1:6). ಇದಕ್ಕೆಲ್ಲಾ ಕಾರಣವೇನೆಂದರೆ ದೇವರ ಆಲಯವು ಹಾಳು ಬಿದ್ದಿರುವುದು (1:4). 

               ಹೊಸ ಒಡಂಬಡಿಕೆಯಲ್ಲಿ ನಾವು ದೇವರಿಗೆ ನಿವಾಸಸ್ಥಾನವಾಗುವುದಕ್ಕಾಗಿ ಪವಿತ್ರಾತ್ಮನ ಮೂಲಕ ಕಟ್ಟಲ್ಪಡುತ್ತಾ  ಇದ್ದೇವೆ (ಎಫೆ 2:22). ನಾವೆಂಬ ಆಲಯದ ಕೆಲಸ ಎಲ್ಲಿ ತನಕ ಆಯಿತೆಂದು ಯಾವತ್ತಾದರೂ ಯೋಚಿಸಿದ್ದೀರಾ?  ಇಸ್ರಾಯೇಲ್ಯರಂತೆ ನಾವು ಈ ವರುಷ ಬಹಳಷ್ಟು ಸಾರಿ  ವಾಕ್ಯವೆಂಬ ಬೀಜವನ್ನು ವಿವಿಧ ಮಾಧ್ಯಮಗಳ ಮೂಲಕ ಬಿತ್ತಿದೆವು, ಆದರೆ ತಂದ ಫಲವು ಸ್ವಲ್ಪ,  ಬಹಳಷ್ಟು ದೇವರ ವಾಕ್ಯವನ್ನು ಈ ವರುಷ ವಿವಿಧ ಸೇವಕರುಗಳಿಂದ ಕೇಳಿದೆವು. ಅನೇಕ ಆತ್ಮಿಕ ಕೂಟಗಳಿಗೆ ಭಾಗವಹಿಸಿದೆವು, ಉಪವಾಸ ಮಾಡಿದೆವು ಆದರೆ ಆತ್ಮಿಕ ತೃಪ್ತಿ ಸಿಗಲಿಲ್ಲ, ಅನೇಕ ಆಶೀರ್ವಾದವೆಂಬ ವಸ್ತ್ರಗಳನ್ನು ಹೊದ್ದು ಕೊಂಡರೂ ಆತ್ಮಿಕ ಬೆಚ್ಚಗೆಯಿಲ್ಲ.  ಬಹಳಷ್ಟು ಕಲಿತೆವು ಆದರೆ ಪ್ರಾಯೋಗಿಕವಾಗಿ ವಾಕ್ಯದಂತೆ ನಡೆಯಲಾಗಲಿಲ್ಲ. ಕೋಪ,ಜಗಳ,ಹೊಟ್ಟೆಕಿಚ್ಚು,ಹೆಮ್ಮೆ ಹೆಚ್ಚಳಪಡುವಿಕೆ ಎಂಬಿತ್ಯಾದಿ ಶರೀರಾಧೀನ  ಸ್ವಭಾವಗಳಿಂದ ಬಿಡುಗಡೆ ಇಲ್ಲದೆ ಶರೀರಭಾವದ  ಅಭಿಲಾಷೆಗಳನ್ನು ಪೋಷಿಸುತ್ತಾ ದೇವರ ದೃಷ್ಟಿಯಲ್ಲಿ ದುರವಸ್ಥೆಯಲ್ಲಿ ಬಿದ್ದಿರಲು  ಕಾರಣವೇನೆಂದು ಯಾವತ್ತಾದರೂ ಯೋಚಿಸಿದ್ದೀರಾ? ಆತ್ಮಿಕ ಸುಧಾರಣೆ ಮತ್ತು ದೈವಿಕ ಸ್ವಭಾವದ ಕೊರೆತೆಯನ್ನು  ನೋಡಿ ಎಂದಾದರೂ ದುಃಖಪಟ್ಟಿದ್ದೀರಾ? ಯಾಕೆ ದೇವರು ಬಯಸಿದ ಬದಲಾವಣೆ ನನ್ನಲ್ಲಿ ಉಂಟಾಗಲಿಲ್ಲವೆಂದು ನಿಮ್ಮೊಡನೆ ಎಂದಾದರೂ ಕೇಳಿದ್ದೀರಾ? ಹಗ್ಗಾಯನು  ಕೇಳುವಂತೆ “ಇಂದಾದರೂ ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ” (ಹಗ್ಗಾ 1:7).

           ದೇವರ ಆಲಯವು ಹಾಳು ಬಿದ್ದಿರುವಾಗ (ಹಗ್ಗಾಯ 1:4) ಅದನ್ನು ದುರಸ್ಥಿ ಮಾಡದೆ ಏನೆಲ್ಲಾ ಆತ್ಮೀಕ ಕಾರ್ಯಕ್ರಮಗಳನ್ನು ಮಾಡಿದರೂ ಅದು ನಿಷ್ಪ್ರಯೋಜನ. ನಮ್ಮ ಒಳಗಣ ಮನುಷ್ಯನು ಕೆಟ್ಟು ಹೋಗಿರಲಾಗಿ ಹೊರಗಡೆ ಏನೆಲ್ಲಾ ತ್ಯಾಪೆ ಹಚ್ಚಿದರೂ ಹರಕು ಹೆಚ್ಚಾಗುವುದಲ್ಲದೆ ಯಾವ ಪ್ರಯೋಜನವೂ ಉಂಟಾಗುವುದಿಲ್ಲ. ಯಾಕೆಂದರೆ ದೇವರು ಹೃದಯದ ಪ್ರಾಮಾಣಿಕತೆಯನ್ನು ಎದುರು ನೋಡುತ್ತಾನೆ. ಸೌಲನ ತಲೆಗಿಂತ ದಾವೀದನ ಹೃದಯ ದೇವರಿಗೆ ಇಷ್ಟ. ದೇವರು ಕೊಡುವ ನೂತನ ವರ್ಷದಲ್ಲಿ ಫರಿಸಾಯರಂತೆ ನಮ್ಮನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಹೊರಗಣ ಕೆಲಸಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡದೆ ದಾವೀದನಂತೆ ದೇವರ ಹೃದಯದಂತ ಮನುಷ್ಯನಾಗಿ ಬದುಕಲು ಪ್ರಯತ್ನಿಸೋಣ. ಏಲಿಯನಂತೆ ಆತ್ಮಿಕ ಜೀವನದಲ್ಲಿ ಹಾಳು ಬಿದ್ದಿರುವ ಯಜ್ಞವೇದಿಗಳನ್ನು ದುರಸ್ತಿ ಮಾಡೋಣ ಆಗಲೇ ಪರಲೋಕದ ನಿಜವಾದ ಬೆಂಕಿ ಇಳಿಯುವುದು.

            ದೇವರಿಗೆ ಯಾವುದೂ ಅಸಾಧ್ಯವಲ್ಲ. ನೀವು ಈ ವರುಷ ಎಷ್ಟೇ ಸೋತು ಹೋದವರಾರೂ ನನಗೆ ಜಯವಿದೆಯೆಂದು ನಂಬಿರಿ. ದೇವರ ಕಾರ್ಯ ನಮ್ಮಲ್ಲಿ ನಡೆಯದೇ ತಡೆಯುವುದು ನಮ್ಮ ಅಪನಂಬಿಕೆಯಾಗಿದೆ. ನಂಬುವವನ ಮೂಲಕ ಸಕಲವೂ ಸಾಧ್ಯ. ನೀವು ದೇವರಿಂದ ಎಷ್ಟೇ ದೂರಹೋದರೂ  ಕೆಟ್ಟುಹೋದರೂ ಆತನ ಬಳಿಗೆ ಹಿಂತಿರುಗಲು ಮನಸ್ಸು ಮಾಡುವುದಾದರೆ ಸ್ವೀಕರಿಸಲು ಸದಾ ಆತನು ಸಿದ್ದನಿದ್ದಾನೆ. ಕೆಟ್ಟು ಹೋದ ಮಗನ ಪಶ್ಚಾತ್ತಾಪದ ಪಾದಗಳು  ಕುಂಟುತ್ತಾ ಸಾಗಿದರೆ ತಂದೆಯ ಕ್ಷಮೆಯ ಪಾದಗಳು ತವಕಿಸುತ್ತಾ ವೇಗದಲ್ಲಿ ಓಡುತ್ತಿದೆ ಎಂಬುದನ್ನು ಎಂದೂ ಮರೆಯದಿರಿ. ನೂತನ ವರುಷದಲ್ಲಿ ತಂದೆಯ ಮನೆಗೆ ಹಿಂತಿರುಗೋಣ, ಆತ್ಮೀಕ ಸ್ಥಿತಿಗಳನ್ನು ದುರಸ್ಥಿ ಮಾಡೋಣ, ಮನೆಯಲ್ಲೇ ನಲೆನಿಳ್ಳೋಣ. ತಂದೆಯ ಹೃದಯವುಳ್ಳವರಾಗೋಣ.

Leave A Reply

Your email address will not be published.