ಪೂರಕ ಆಹಾರ ಕಡಿಮೆ ಮಾಡಿ, ನೈಸರ್ಗಿಕ ಆಹಾರ ಸೇವನೆಗೆ ಒತ್ತು ಕೊಡಿ, ಆರೋಗ್ಯದಿಂದ ಬಾಳಿ
ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೌಷ್ಟಿಕ ಮಾಸ ಎಂದು ಆಚರಿಸಲಾಗುತ್ತದೆ. ಉತ್ತಮ ಪೌಷ್ಟಿಕಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಲು ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಬಗ್ಗೆ ಹೈದರಾಬಾದ್ ನ ಅಪೊಲೊ ಕ್ರೆಡಲ್ ಆಸ್ಪತ್ರೆಯ ಡಯಟಿಷಿಯನ್ ವಿ ಕೃಷ್ಣ ದೀಪಿಕಾ ಬೆಳಕು ಚೆಲ್ಲಿದ್ದಾರೆ.
ಹೈದರಾಬಾದ್: ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೌಷ್ಟಿಕ ಮಾಸ ಎಂದು ಆಚರಿಸಲಾಗುತ್ತದೆ. ಉತ್ತಮ ಪೌಷ್ಟಿಕಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಲು ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಬಗ್ಗೆ ಹೈದರಾಬಾದ್ ನ ಅಪೊಲೊ ಕ್ರೆಡಲ್ ಆಸ್ಪತ್ರೆಯ ಡಯಟಿಷಿಯನ್ ವಿ ಕೃಷ್ಣ ದೀಪಿಕಾ ಬೆಳಕು ಚೆಲ್ಲಿದ್ದಾರೆ.
ಪ್ರಾಕೃತಿಕ ಅಥವಾ ನೈಸರ್ಗಿಕ ಪೌಷ್ಟಿಕಾಂಶವೇ ಅಥವಾ ಕೃತಕ ಪೂರಕ ಆಹಾರ ಉತ್ತಮವೇ?
ಪೌಷ್ಟಿಕಾಂಶದ ಕೊರತೆಯನ್ನು ಹೊರತುಪಡಿಸಿ ಪೂರಕ ಆಹಾರಗಳಿಗಿಂತ ಸಹಜ ಆಹಾರಗಳಿಂದ ಸಿಗುವ ಪೋಷಕಾಂಶಗಳು ಯಾವಾಗಲೂ ಉತ್ತಮವಾಗಿರುತ್ತದೆ.
ಆಹಾರವನ್ನು ಬುದ್ಧಿವಂತಿಕೆಯಿಂದ ಸೇವಿಸಿ
ನಾವು ಖರೀದಿಸುವ ಆಹಾರಗಳ ಮೇಲೆ ಗಮನವಿರಲಿ. ಅಧಿಕ ಕೊಬ್ಬು, ಕೃತಕ ಬಣ್ಣಗಳು ಮತ್ತು ಸಂರಕ್ಷಕಗಳನ್ನು ಒಳಗೊಂಡಿರುವ ವಸ್ತುಗಳನ್ನು ಆದಷ್ಟು ಸೇವಿಸದೇ ಇರುವುದು ಉತ್ತಮ. ಹೆಚ್ಚಿನ ಕ್ಯಾಲೊರಿ ಹೊಂದಿರುವ ಸಕ್ಕರೆ, ಎಣ್ಣೆಯುಕ್ತ, ಕರಿದ ಮತ್ತು ತಿನ್ನಲು ಸಿದ್ಧವಾದ ಆಹಾರವನ್ನು ನಿರ್ಲಕ್ಷಿಸಿ. ತಾಜಾ ಹಣ್ಣುಗಳು ಮತ್ತು ಆರೋಗ್ಯಕರ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಿ.
ಆರೋಗ್ಯಕರ ಭೋಜನ ಅಂದರೆ ಏನು, ಹೇಗೆ?
ಶಾಪಿಂಗ್ ಮಾಡಲು ಹೋಗುವ ಮೊದಲು ಪಟ್ಟಿ ಮಾಡಿಕೊಂಡರೆ ಸಮಯ ಉಳಿತಾಯ ಮಾಡಬಹುದು. ಹಸಿವೆ ಇದ್ದಾಗ ಶಾಪಿಂಗ್ ಮಾಡಿದರೆ ನಾವು ಅನಾರೋಗ್ಯಕರ ಆಹಾರವನ್ನು ಹೆಚ್ಚು ಖರೀದಿಸಬಹುದು. ಪ್ರೊಟೀನ್, ವಿಟಮಿನ್, ಕ್ಯಾಲರಿ, ಮಿನರಲ್ಸ್, ಕೊಬ್ಬಿನ ಅಂಶ ಮತ್ತು ನಾರಿನ ಪ್ರಮಾಣ ಸಮ ಪ್ರಮಾಣದಲ್ಲಿರುವ ಆಹಾರ ಉತ್ತಮ.
ದೇಹದಲ್ಲಿ ಯಾವುದಾದರೂ ಕೊರತೆಯಿದ್ದರೆ ಪೂರಕ ಆಹಾರಗಳನ್ನು ಡಯಟಿಷಿಯನ್ ಗಳು ಹೇಳಬಹುದು. ವಿಟಮಿನ್ ಡಿ ಮತ್ತು ವಿಟಮಿನ್ ಎಯನ್ನು ಹೆಚ್ಚಾಗಿ ಸೇವಿಸುವುದು ಉತ್ತಮವಲ್ಲ.
ಕೊರೋನಾವನ್ನು ಯಾವುದೇ ಪೂರಕ ಆಹಾರ ತಡೆಗಟ್ಟುವುದಿಲ್ಲ
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅನೇಕ ಪೂರಕ ಆಹಾರಗಳ ಬಗ್ಗೆ ಜನರು ಮಾತನಾಡುತ್ತಿದ್ದರು. ವೈದ್ಯರ ಸಲಹೆ ಪಡೆಯದೆ ಪೂರಕ ಆಹಾರಗಳನ್ನು ಸೇವಿಸಿದರೆ ಅಡ್ಡ ಪರಿಣಾಮಗಳು ಜಾಸ್ತಿ.
ನೈಸರ್ಗಿಕ ಮೂಲ:
ವಿಟಮಿನ್ ಸಿ: ಆಸ್ಕೋರ್ಬಿಕ್ ಆಮ್ಲವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತೀವ್ರವಾದ ಉಸಿರಾಟದ ತೊಂದರೆ ಮತ್ತು ನೆಗಡಿಯಂತಹ ತೀವ್ರ ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಕಾರ, ವಿಟಮಿನ್ ಸಿ ಯ ಆರ್ ಡಿಎ ದಿನಕ್ಕೆ 40 ಮಿಗ್ರಾಂ. ವಿಟಮಿನ್ ಸಿ ಯ ಹೆಚ್ಚಿನ ಪ್ರಮಾಣವು ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ಗಮನಾರ್ಹ ಸುಧಾರಣೆಯನ್ನು ತೋರಿಸಿದೆ. ಈ ವಿಟಮಿನ್ ನೆಲ್ಲಿಕಾಯಿ(100 ಗ್ರಾಂ 600 ಮಿಗ್ರಾಂ), ಪೇರಳೆ (212 ಮಿಗ್ರಾಂ), ನಿಂಬೆ (39 ಮಿಗ್ರಾಂ), ಪಪ್ಪಾಯಿ (57 ಮಿಗ್ರಾಂ), ನುಗ್ಗೆಕಾಯಿ ಎಲೆಗಳು (220 ಮಿಗ್ರಾಂ), ಎಲೆಕೋಸು (124 ಮಿಗ್ರಾಂ), ಕೊತ್ತಂಬರಿ ಸೊಪ್ಪು (135 ಮಿಗ್ರಾಂ) ಮತ್ತು ಹಸಿ ಮೆಣಸಿನಕಾಯಿಗಳಲ್ಲಿ (111 ಮಿಗ್ರಾಂ) ಇರುತ್ತದೆ.
ವಿಟಮಿನ್ ಡಿ: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಡಿ ಪಡೆಯುವ ಅತ್ಯಂತ ಸುಲಭ ಮಾರ್ಗವೆಂದರೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು. ಮೊಟ್ಟೆಯ ಹಳದಿ ಲೋಳೆ (218 ಐಯು), ಚೀಸ್ (24 ಐಯು), ಕಿತ್ತಳೆ ರಸ ಮತ್ತು ಸಿರಿಧಾನ್ಯಗಳಂತಹ ಬಲವರ್ಧಿತ ಆಹಾರಗಳು.
ಮೆಗ್ನೀಸಿಯಮ್: ಮೆಗ್ನೀಸಿಯಮ್ ಕೊರತೆಯು ಸಿರೊಟೋನಿನ್ ಉತ್ಪಾದನೆ ಕಡಿಮೆಯಾಗಲು ಕಾರಣವಾಗಬಹುದು, ಇದು ದೇಹದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಬೀಜಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಡೈರಿಗಳು ಮೆಗ್ನೀಸಿಯಮ್ನ ಕೆಲವು ಉತ್ತಮ ಮೂಲಗಳಾಗಿವೆ. ಸಿರಿಧಾನ್ಯಗಳು, ಬೇಳೆಕಾಳುಗಳು ಮತ್ತು ಬೀಜಗಳು 100 ಗ್ರಾಂಗೆ 40-200 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಹೊಂದಿರುತ್ತವೆ.
ಸತು: ಸತು ಕೊರತೆಯು ದೇಹವನ್ನು ಉಸಿರಾಟದ ಸೋಂಕಿಗೆ ಹೆಚ್ಚು ಒಳಗಾಗುತ್ತದೆ. ಗೋಡಂಬಿ (5.6 ಮಿಗ್ರಾಂ), ಕಡಲೆಕಾಯಿ (3.3 ಮಿಗ್ರಾಂ), ಕುಂಬಳಕಾಯಿ ಬೀಜಗಳು (7.9 ಮಿಗ್ರಾಂ), ಅಗಸೆಬೀಜ (4 ಮಿಗ್ರಾಂ) ಮತ್ತು ಓಟ್ಸ್ (3 ಮಿಗ್ರಾಂ) ಸತುವು ಉತ್ತಮ ಆಹಾರ ಮೂಲವಾಗಿದೆ.
ಒಮೆಗಾ 3 ಕೊಬ್ಬಿನಾಮ್ಲಗಳು: ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿರು ಎಲೆಗಳ ತರಕಾರಿಗಳು, ವಾಲ್ ನಟ್ಸ್, ಸೋಯಾ, ಹುರುಳಿ, ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳಲ್ಲಿ ಇರುತ್ತದೆ.
ಆಂಟಿ ಆಕ್ಸಿಡೆಂಟ್ಸ್(ಉತ್ಕರ್ಷಣ ನಿರೋಧಕಗಳು): ಶುಂಠಿ, ಬೆಳ್ಳುಳ್ಳಿ, ಅರಿಶಿನ, ಓಟ್ಸ್, ಸೋಯಾಬೀನ್, ಮೆಣಸು ಮತ್ತು ಲವಂಗ ಮೂಲಗಳು.